ಅಭಿನಯ
	
ವಿಶಾಲಾರ್ಥದಲ್ಲಿ ಎಲ್ಲ ಸ್ಥಿತಿವಿಶೇಷಗಳ ಅನುಕರಣೆಗೂ ಈ ಮಾತು ಅನ್ವಯವಾಗುತ್ತದೆ. ಹುಟ್ಟಿನಿಂದ ಹಿಡಿದು ಸಾವಿನವರೆಗಿನ ಜೀವಿಯ ಪ್ರತಿಯೊಂದು ಕ್ರಿಯೆಯೂ ಹಾವಭಾವಗಳೂ ಅನುಕರಣ ಯೋಗ್ಯವಾಗಿದ್ದು ಅಭಿನಯವೆನಿಸಿಕೊಳ್ಳಬಲ್ಲವಾದ್ದರಿಂದ ಅಭಿನಯದ ಪ್ರಕಾರಗಳು ಅನಂತವಾಗಿವೆ. ಲಲಿತಕಲೆಗೆ ಸಂಬಂಧಿಸಿದಂತೆ ಅಭಿನಯದ ವ್ಯಾಖ್ಯೆ ವಿವರಗಳನ್ನು ರೂಪಿಸುವ ಪ್ರಯತ್ನವಾದರೋ ಬಹಳ ಹಿಂದಿನಿಂದ ನಡೆದಿದೆ. ಋಗ್ವೇದದಿಂದ ಪಾಠವನ್ನೂ ಯಜುರ್ವೇದದಿಂದ ಅಭಿನಯವನ್ನೂ ಸಾಮವೇದದಿಂದ ಗೀತೆಯನ್ನೂ ಅಥರ್ವಣವೇದದಿಂದ ರಸವನ್ನೂ ತೆಗೆದುಕೊಂಡು ಬ್ರಹ್ಮ ಧರ್ಮಾರ್ಥಕಾಮ ಮೋಕ್ಷವನ್ನು ಕೊಡತಕ್ಕ ನಾಟ್ಯಶಾಸ್ತ್ರವನ್ನು ನಿರ್ಮಿಸಿದನೆಂದು ಹೇಳುವ ಭರತಮುನಿಯ ಮಾತನ್ನು ಗಮನಿಸಿದಲ್ಲಿ ಅಭಿನಯಕ್ಕೆ ಮೂಲ ಯಜುರ್ವೇದವಾಗುತ್ತದೆ.
	
ನೃತ್ಯಕಲೆಯಲ್ಲಿ ನಾಟ್ಯ, ನೃತ್ತ, ನೃತ್ಯ ಎಂದು ಮೂರು ವಿಭಾಗಗಳಿದ್ದು ಅದರಲ್ಲಿನ ನೃತ್ಯವಿಭಾಗದಲ್ಲಿ ಅಭಿನಯಕ್ಕೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಸುಖದುಃಖಗಳಿಂದ ಉಂಟಾಗುವ ಮನೋವಿಕಾರವನ್ನು ವ್ಯಕ್ತಗೊಳಿಸುವ ಕಲೆಗೆ ಅಭಿನಯವೆಂದು ಹೇಳಬಹುದು. ಮೂಲತಃ ಭರತನ ದೃಷ್ಟಿಯಲ್ಲಿ ಇದು ನಾಟ್ಯಕ್ಕೆ ಮಾತ್ರ ಸಂಬಂಧಿಸಿದ್ದರೂ ಕಾಲಕ್ರಮೇಣ ಎಲ್ಲ ರೂಪಕಕಲೆಗೂ ಅನ್ವಯವಾಯಿತು. ಅಭಿನಯ ಎಂಬ ಪದದ ಉತ್ಪತ್ತಿ ನಾಟ್ಯಶಾಸ್ತ್ರದ ಪ್ರಕಾರ ಹೀಗಿದೆ: ಅಭಿನಯ ಎಂಬ ಶಬ್ದದಲ್ಲಿನ ಅಭಿ ಎಂಬ ಉಪಸರ್ಗಕ್ಕೆ ಅಭಿಮುಖ ಎಂದು ಅರ್ಥಮಾಡಿದ್ದಾರೆ. ನೀಙï ಧಾತುವಿಗೆ ಹೊಂದುವುದು ಎಂಬ ಅರ್ಥವಿದೆ. ಉದ್ದಿಷ್ಟ ಅರ್ಥ ಅಥವಾ ಭಾವಗಳನ್ನು ಅಭಿನಯ ಸಾಮಾಜಿಕರ ಹೃದಯಕ್ಕೆ ಕೊಂಡೊಯ್ಯುತ್ತದೆ. ಅಂಗೋಪಾಂಗಗಳಿಂದೊಡಗೂಡಿ ಪ್ರಯೋಗಿಸಲ್ಪಡುವುದರಿಂದ ವಿವಿಧಾರ್ಥಗಳನ್ನು ಸಾಮಾಜಿಕರು ಭಾವಿಸಿಕೊಳ್ಳಲು ಇದು ವಿಶೇಷ ನೆರವು ನೀಡುತ್ತದೆ. ಆದ್ದರಿಂದ ಇದನ್ನು ಅಭಿವ್ಯಕ್ತಿಯ ಒಂದು ವಿಶಿಷ್ಟ ರೀತಿ ಎಂದು ಹೇಳಬಹುದು.
	
ಅಭಿನಯವನ್ನು ಅಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವೆಂಬುದಾಗಿ ನಾಲ್ಕು ವಿಭಾಗವಾಗಿ ವಿಂಗಡಿಸಿದ್ದಾರೆ. ಅಂದಮಾತ್ರಕ್ಕೆ ಇವು ಪ್ರಯೋಗಕ್ಕೆ ಅರ್ಹವಾದ ಪ್ರತ್ಯೇಕ ಘಟಕಗಳು ಎಂದು ಭಾವಿಸಲಾಗದು. ಪರಸ್ಪರ ಇವುಗಳಿಗೆ ಸಾಪೇಕ್ಷೆ ಉಂಟು.
	
ಕಲಾತ್ಮಕವಾದ ಅಂಗವಿನ್ಯಾಸಗಳನ್ನು ಆಂಗಿಕಾಭಿನಯವೆಂದು ಹೇಳುತ್ತಾರೆ. ಅಂಗ, ಉಪಾಂಗ, ಪ್ರತ್ಯಂಗ ಸಹಿತವಾದ ಆಂಗಿಕಾಭಿನಯ ಮೂರು ವಿಧವಾಗಿ ವಿಭಾಗಿಸಲ್ಪಟ್ಟಿದೆ: 1 ಶಾರೀರ, 2 ಮುಖಜ, 3 ಚೇಷ್ಟಾಕೃತಿ, ಶಾರೀರಾಭಿನಯ ವಾಕ್ಯ, ಸೂಚ, ಅಂಕುರ, ಶಾಖ, ನಾಟ್ಯಾಯಿತ, ನಿವೃತ್ಯಂಕುರ ಎಂಬುದಾಗಿ ಆರು ವಿಧ ಎಂದು ಭರತನ ನಾಟ್ಯಶಾಸ್ತ್ರದಲ್ಲಿ ಹೇಳಿದೆ. ನಾಟ್ಯ ಅಂಗ, ಉಪಾಂಗ, ಪ್ರತ್ಯಂಗ ಸಹಿತವಾಗಿಯೇ ಇದೆ. ಶಿರ, ಹಸ್ತಗಳು, ಕಟಿ, ವಕ್ಷಸ್ಥಳ, ಅಧರ, ಚಿಬುಕ, ಕಣ್ಣುಗುಡ್ಡೆಗಳು, ಕಪೋಲ-ಈ ಆರು ಉಪಾಂಗಗಳು. ಭುಜಗಳು, ತೋಳುಗಳು, ಬೆನ್ನು, ತೊಡೆಗಳು, ಪೃಷ್ಠ, ಉದರ-ಇವೇ ಆರು ಪ್ರತ್ಯಂಗಗಳು. ಅಂಗ, ಉಪಾಂಗ, ಪ್ರತ್ಯಂಗಗಳನ್ನು ಈ ರೀತಿ ವಿಂಗಡಿಸಲಾಗಿದೆಯಾದರೂ ಕೆಲವು ಗ್ರಂಥಗಳ ಪ್ರಕಾರ ಇವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದುಂಟು. ಸಿಂಹ ಭೂಪಾಲ ತನ್ನ ಲಾಸ್ಯರಂಜನದಲ್ಲಿ ಉಪಾಂಗಗಳು ಹದಿನೈದು ಎಂದು ಹೇಳಿದ್ದಾನೆ.
	
ಅಂಗಗಳಿಂದ ಮಾಡುವ ಅಭಿನಯದಲ್ಲಿ ಶಿರೋಭೇದ, ಗ್ರೀವಾಭೇದ, ದೃಷ್ಟಿಭೇದ, ಭ್ರುಕುಟಿಭೇದ, ಕಟಿಭೇದ, ಹಸ್ತಭೇದ, ಪಾದಭೇದ-ಮುಂತಾದ ನಾನಾ ಭೇದಗಳನ್ನು ಶಾಸ್ತ್ರಕಾರರು ವಿವರವಾಗಿ ವಿಶ್ಲೇಷಿಸಿದ್ದಾರೆ. ನಾಟ್ಯದಲ್ಲಿ ಇವನ್ನು ವಿವಿಧ ಮುದ್ರೆಗಳೆಂದಿದ್ದಾರೆ. ನಟನಾದವನಿಗೆ ಈ ಒಂದೊಂದು ಅಂಗಗಳ ವಿನ್ಯಾಸ ಲಕ್ಷಣಬದ್ಧವಾಗಿಯೇ ಇರಬೇಕೆಂಬ ನಿಯಮವಿದೆ ಮತ್ತು ಆತನಿಗೆ ಈ ಭೇದಗಳ ಸೂಕ್ಷ್ಮಪರಿಚಯವೂ ಇರಬೇಕು. ಆತ ತಾನು ಅನುಕರಿಸುವ ವ್ಯಕ್ತಿಯ ಅಥವಾ ವಸ್ತುವಿನ ಗುಣ, ಪ್ರಕೃತಿ, ಸ್ವಭಾವ, ಭಾವಗಳನ್ನು ಯಥಾವತ್ತಾಗಿ ಚಿತ್ರಿಸಬೇಕು. ಹೀಗಿದ್ದರೆ ಮಾತ್ರ ನಟ ಪ್ರೇಕ್ಷಕರಲ್ಲಿ ರಸಾನುಭವವನ್ನು ಉಂಟುಮಾಡಲು ಶಕ್ತನಾಗುತ್ತಾನೆ.
	
ಪಾಶ್ಚಾತ್ಯ ನಾಟ್ಯಪದ್ಧತಿಯಲ್ಲೂ ಇದಕ್ಕೆ ಈ ಬಗೆಯ ಪ್ರಾಧಾನ್ಯ ದೊರೆತಿದೆ. ಡಂಕನ್ ಪದ್ಧತಿಯಲ್ಲಿ ಆರು ಪ್ರಾಥಮಿಕ ಸ್ಥಾನಗಳ ಅಭ್ಯಾಸಕ್ಕೆ ಮಹತ್ತ್ವಪೂರ್ಣ ಸ್ಥಾನವಿದೆ. ಅವುಗಳಲ್ಲಿ ಹಿಮ್ಮಡಿ ಕೂಟ, ಬಲಪಾದವನ್ನು ಪಕ್ಕಕ್ಕೆ ತಿರುಗಿಸುವುದು, ಬಲಹಿಮ್ಮಡಿಯನ್ನು ಎಡಪಾದದ ಅಂಗುಟ ಬಳಿಗೆ ತರುವುದು, ಬಲಗಾಲನ್ನು ಮುಂದೆ ತರುವುದು ಮತ್ತು ಬಲಹಿಮ್ಮಡಿಯನ್ನು ಎಡಹೆಬ್ಬೆರಳಿನ ಬಳಿಗೆ ತರುವುದು-ಇವೇ ಮೊದಲ ಐದು ಸ್ಥಾನಗಳು. ಆರನೆಯದು ನಾಟ್ಯದಿಂದ ನಾಟ್ಯಕ್ಕೆ ಬೇರೆಯಾಗುವ ವೈಶಿಷ್ಟ್ಯಪೂರ್ಣ ಗತಿ. ಗ್ರೀಕರ ಕಾಲದಲ್ಲಿ ಯೋಧರೆಲ್ಲರೂ ನಾಟ್ಯವನ್ನು ವಿಧಿಪೂರ್ವಕವಾಗಿ ಕಲಿತುಕೊಳ್ಳಬೇಕೆಂಬ ನಿಯಮವೇ ಇದ್ದಿತಂತೆ. ಸುಪ್ರಸಿದ್ಧ ಗ್ರೀಕ್ ನಾಟಕಕಾರ ಸಫೋಕ್ಲೀಸ್ ಕೂಡ ನಾಟ್ಯಪ್ರವೀಣನಾಗಿದ್ದ. ಆಧುನಿಕ ಗೇಯರೂಪಕ (ಬ್ಯಾಲೆ)ಗಳಲ್ಲಿಯೂ ಪ್ರಾಚೀನ ಅಭಿನಯದ ಚಿಹ್ನೆಗಳನ್ನು ಗುರುತಿಸಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಗತಿಗಳು ಆಂಗಿಕಾಭಿನಯದ ಮಹತ್ತ್ವಕ್ಕೆ ಸಾಕ್ಷಿಯಾಗಿವೆ. ಶಾರ್ಙದೇವನು ಸಂಗೀತರತ್ನಾಕರದಲ್ಲಿ ಆಹಾರ್ಯಾಭಿನಯವನ್ನು ಕುರಿತು ಈ ರೀತಿ ತಿಳಿಸಿದ್ದಾನೆ-ನೀಳವಾದ ತಲೆಗೂದಲುಗಳು, ಅರೆಬಿರಿದ ಹೂಮೊಗ್ಗುಗಳಿಂದ ಅಲಂಕರಿಸಲ್ಪಟ್ಟು ದೇಹದ ಹಿಂಭಾಗದಲ್ಲಿ, ಸಂದರ್ಭೋಚಿತವಾದ ವೈಖರಿಯಲ್ಲಿ ಇಳಿದಿರಬೇಕು. ಮಕರಾ ಕೃತಿಯ ಕುಂಡಲಗಳಿರಬೇಕು. ಹಣೆ ಕೇಸರ ಮತ್ತು ಗಂಧದಿಂದ ಲೇಪಿತಗೊಂಡಿರಬೇಕು. ಕಣ್ಣುಗಳು ಕಾಡಿಗೆಯಿಂದ ಅಲಂಕರಿಸಲ್ಪಟ್ಟಿರಬೇಕು. ದಂತಪಂಕ್ತಿಗಳು ಸ್ವಚ್ಛವಾಗಿರಬೇಕು. ಕಸ್ತೂರಿ ಮತ್ತು ಚಂದನದಿಂದ ಕೂಡಿದ ತಿಲಕವನ್ನು ಹಣೆಯಲ್ಲಿಟ್ಟುಕೊಳ್ಳಬೇಕು. ಕುತ್ತಿಗೆಯ ಹಾರಗಳು ನಕ್ಷತ್ರದ ಆಕಾರದಲ್ಲಿ ಇರುತ್ತ ವಕ್ಷಸ್ಸಿನ ಮೇಲೆ ಮುತ್ತಿನಹಾರ ಕಂಗೊಳಿಸಬೇಕು. ಬಿಳಿ ಅಥವಾ ತಿಳಿಯಾದ ಬಣ್ಣವನ್ನುಳ್ಳ ತೆಳುವಾದ (ಪಾರದರ್ಶಕ) ವಸ್ತ್ರವನ್ನು ಮೇಲುಹೊದಿಕೆಯನ್ನಾಗಿ ಉಪಯೋಗಿಸಬೇಕು. ಇದು ನರ್ತಕಿಯ ಮೈಬಣ್ಣಕ್ಕೆ ಹೊಂದಿಕೊಳ್ಳುವಂತೆ ಇರುವುದು ಬಹುಮುಖ್ಯ. ಸೀರೆಯನ್ನು ಉಟ್ಟುಕೊಳ್ಳುವಲ್ಲಿ ಆಯಾದೇಶದ ವಾಡಿಕೆಯನ್ನು ಅನುಸರಿಸತಕ್ಕದ್ದು. ಅಭಿನಯದರ್ಪಣದಲ್ಲಿ ಹೇಳಿರುವಂತೆ ಕಾಲಿಗೆ ತೊಡುವ ಕಿಂಕಿಣಿ (ಕಿರುಗೆಜ್ಜೆ) ಕಂಚಿನದಾಗಿದ್ದು ಶ್ರುತಿಶುದ್ಧವಾದ ಧ್ವನಿಗೂಡುವಂತಿರಬೇಕು.
	
ಸತ್ವ ಎಂದರೆ ಮನಸ್ಸಿನಿಂದ ಹುಟ್ಟುವ ಒಂದು ವಿಶೇಷಸ್ಥಿತಿ. ಇದು ಸಮಾಹಿತವಾದ ಅಂದರೆ ಸಮಾಧಿಸ್ಥಿತಿಯನ್ನು ಹೊಂದಿದ ಮನೋಭೂಮಿಕೆಯಲ್ಲಿ ಉತ್ಪನ್ನವಾಗುವುದು. ಪರರ ಸುಖ ದುಃಖಭಾವನೆಗಳನ್ನು ತಾನು ಭಾವಿಸಿಕೊಳ್ಳುವ ಅಂತಃಕರಣವಿಶೇಷವೇ ಸತ್ವ ಎಂದು ಧನಿಕ ಮತ್ತು ವಿದ್ಯುನಾಥರ ಅಭಿಪ್ರಾಯ. ಈ ಚಿತ್ತವೃತ್ತಿರೂಪವಾದ ಸತ್ವ ಬಾಹ್ಯ ಮತ್ತು ಅಭ್ಯಂತರ ಎಂದು ಎರಡು ವಿಧ. ಮೊದಲನೆಯದು ಮನೋಭೂಮಿಕೆಯಲ್ಲಿದ್ದು ಸ್ವೇದ, ರೋಮಾಂಚನಗಳ ಮೂಲಕ ಶರೀರದಲ್ಲಿ ಅಭಿವ್ಯಕ್ತವಾಗುವುದು. ಎರಡನೆಯದು ಪ್ರಾಣಭೂಮಿಕೆಯಲ್ಲಿರುವುದು. ನಾಟ್ಯದಲ್ಲಿ ರತ್ಯಾದಿ ಸ್ಥಾಯೀಭಾವಾನುಗುಣವಾಗಿ ಹುಟ್ಟುವ ರೋಮಾಂಚ, ಅಶ್ರುಪಾತ, ವೈವಣ್ರ್ಯ ಮುಂತಾದವುಗಳೇ ಸತ್ವಸ್ವಭಾವಗಳು ಇವುಗಳನ್ನು ಅನ್ಯ ಮನಸ್ಕ ಎಂದರೆ ಏಕಾಗ್ರತೆ ಇಲ್ಲದವ ಅಭಿನಯಿಸಲಾರ. ಸ್ವಭಾವಾನುಕೃತಿರ್ನಾಟ್ಯಂ ಎಂದು ಧನಂಜಯ ಹೇಳಿರುವಂತೆ ನಾಟ್ಯದಲ್ಲಿ ಸತ್ವ ಅತ್ಯಾವಶ್ಯಕ. ಸರ್ವನಾಟ್ಯವೂ ಸಾತ್ವಿಕಾಭಿನಯದ ಮೂಲಕವಾಗಿಯೇ ಪ್ರತಿಷ್ಠಿತವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
	
ಸಾತ್ವಿಕಾಭಿನಯ ಎಂಟು ವಿಧ: 1 ಸ್ತಂಭ, 2 ಸ್ವೇದ, 3 ರೋಮಾಂಚ, 4 ಸ್ವರಭೇದ, 5 ವೇಪಥು, 6 ವೈವಣ್ರ್ಯ, 7 ಅಶ್ರು, 8 ಪ್ರಳಯ.
	
ಹರ್ಷ, ಭಯ, ರೋಗ, ಶೋಕ, ವಿಸ್ಮಯ, ವಿಷಾದ ಮೊದಲಾದವುಗಳಿಂದ ಸ್ತಂಭ ಎಂದರೆ ಸ್ತಬ್ಧತೆ ಉಂಟಾಗುವುದು. ಸ್ಮರಣೆ ಇಲ್ಲದಿರುವಿಕೆ, ಚಲಿಸದಿರುವಿಕೆ, ಜಡತ್ವ, ಶೂನ್ಯಸ್ಥಿತಿಯಲ್ಲಿರುವುದು, ಅಂಗಶೈಥಿಲ್ಯ ಇವುಗಳಿಂದ ಸ್ತಂಭವನ್ನು ಅಭಿನಯಿಸಬೇಕು. ಕ್ರೋಧ, ಭಯ, ಹರ್ಷ, ಲಜ್ಜಾ, ದುಃಖ, ಶ್ರಮ, ರೋಗ, ತಾಪ, ಆಘಾತ, ವ್ಯಾಯಾಮ ಇವುಗಳಿಂದ ಸ್ವೇದ ಹುಟ್ಟುವುದು. ಬೀಸಣಿಕೆಯಿಂದ ಬೀಸಿಕೊಳ್ಳುವುದು, ಬೆವರು ಒರೆಸಿಕೊಳ್ಳುವುದು, ಗಾಳಿಯನ್ನು ಅಪೇಕ್ಷಿಸುವುದು ಮೊದಲಾದವುಗಳಿಂದ ಸ್ವೇದವನ್ನು ವ್ಯಕ್ತಪಡಿಸಬೇಕು. ಸ್ಪರ್ಶ, ಭಯ, ಶೀತ, ಹರ್ಷ, ಕ್ರೋಧ, ರೋಗ ಇವುಗಳಿಂದ ರೋಮಾಂಚ ಹುಟ್ಟುವುದು. ಮೈಮೇಲಿನ ಕೂದಲುಗಳು ನಿಮಿರಿ ನಿಲ್ಲುವುದರ ಮೂಲಕ ರೋಮಾಂಚವನ್ನು ತೋರ್ಪಡಿಸಬೇಕು. ಭಯ, ಹರ್ಷ, ಕ್ರೋಧ, ರೋಗ, ಮುಪ್ಪು, ಮದ ಇವುಗಳಿಂದ ಸ್ವರಭೇದ ಅಂದರೆ ಧ್ವನಿಯಲ್ಲಿ ಕಂಪನ ಉಂಟಾಗುತ್ತದೆ. ಗದ್ಗದ ಸ್ವರದಿಂದ ಅಂದರೆ ಧ್ವನಿಯ ಏರಿಳಿತದಿಂದ ಸ್ವರಭೇದ ಅಭಿನಯಿಸಲ್ಪಡುತ್ತದೆ. ಶೀತ, ಭಯ, ಹರ್ಷ, ರೋಷ, ಸ್ಪರ್ಶ, ಮುಪ್ಪು ಇವುಗಳಿಂದ ವೇಪಥು (ನಡುಕ) ಉಂಟಾಗುವುದು. ಕಂಪನದಿಂದ ಇದರ ಅಭಿನಯವನ್ನು ಪ್ರಕಟಿಸಲಾಗುತ್ತದೆ. ಮುಖದ ವರ್ಣ ಭಾವಗಳಿಗನುಗುಣವಾಗಿ ಬದಲಾಯಿಸುವುದೇ ವೈವಣ್ರ್ಯ, ಕೋಪ ಬಂದಾಗ, ಲಜ್ಜೆಯುಂಟಾದಾಗ ಮುಖ ಕೆಂಪೇರುವುದು, ಕೆಟ್ಟಸುದ್ದಿಯನ್ನು ಕೇಳಿದಾಗ ಮುಖ ಕಪ್ಪಿಡುವುದು ಅನುಭವಕ್ಕೆ ಬಂದ ವಿಷಯವೇ. ಕ್ರೋಧ, ಭಯ, ಶ್ರಮ, ರೋಗ, ತಾಪ, ಆಯಾಸ, ಅಲಸಿಕೆ ಇವುಗಳಿಂದ ವೈವಣ್ರ್ಯ ಸಂಭವಿಸುವುದು. ಮುಖರಾಗ ಭೇದದಿಂದ, ನರಗಳ ಬಿಗಿಯುವಿಕೆಯಿಂದ ವೈವಣ್ರ್ಯವನ್ನು ಅಭಿನಯಿಸಬೇಕು. ಆನಂದ, ಶೋಕ, ಅಮರ್ಷ, ಅಂಜನ, ಭಯ, ರೋಗ, ಧೂಮ, ಆಕಳಿಕೆ, ನಿಶ್ಚಲ ನೋಟ, ಮುಂತಾದವುಗಳಿಂದ ಅಶ್ರು ಉದ್ಭವಿಸುವುದು. ನೀರಿನಿಂದ ಕೂಡಿದ ಕಣ್ಣುಗಳು, ಕಣ್ಣನ್ನು ಒರೆಸಿಕೊಳ್ಳುವುದು, ಮಾತು ಮಾತಿಗೆ ಕಣ್ಣೀರಿನ ಬಿಂದುಗಳು ಬೀಳುವುದು. ಚಲನೆ ಇಲ್ಲದಿರುವುದು, ಉಸಿರಾಟ ಕಡಿಮೆಯಾಗುವುದು, ನೆಲದಮೇಲೆ ಬೀಳುವುದು ಇವುಗಳಿಂದ ಅದನ್ನು ಅಭಿನಯಿಸಬೇಕು.	
	
ರಸಸಮುದಾಯರೂಪವೇ ನಾಟ್ಯ. ಆದುದರಿಂದ ಕೇವಲ ಈ ನಾಲ್ಕು ವಿಧವಾದ ಅಭಿನಯಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ ಮಾತ್ರದಿಂದಲೇ ಅದು ಪರಿಪೂರ್ಣವಾಗುವುದಿಲ್ಲ. ರತ್ಯಾದಿ ಸ್ಥಾಯೀಭಾವಗಳ ಮುಖಾಂತರ ಶೃಂಗಾರಾದಿ ರಸಗಳನ್ನು ವಸ್ತುವಿಗನುಗುಣವಾಗಿ ವ್ಯಕ್ತಗೊಳಿಸಬೇಕು. ರಸ, ಭಾವ, ಅಭಿನಯ ಇವುಗಳಿಗಿರುವ ಪರಸ್ಪರ ಸಂಬಂಧವನ್ನು ನಟನಾದವ ಅರಿತುಕೊಳ್ಳಬೇಕು. ರಸವಿಲ್ಲದ ಅಭಿನಯ ಕೇವಲ ಶುಷ್ಕವಾದ ಚಲನವಲನಗಳಾಗುತ್ತವೆ. ಪರಿಮಳವಿಲ್ಲದ ಹೂವಿನಂತೆ ಪ್ರಾಣವಿಲ್ಲದ ದೇಹದಂತೆ ರಸವಿಲ್ಲದ ನಾಟ್ಯ. ಹೀಗೆ ನಾಟ್ಯ ಮತ್ತು ರಸ ಪರಸ್ಪರ ಒಂದನ್ನೊಂದು ಆಶ್ರಯಿಸಿಕೊಂಡಿದ್ದರೂ ರಸವೇ ನಾಟ್ಯದಲ್ಲಿ ಜೀವಾಳ. ವ್ಯಂಜನಗಳಿಂದ ಕೂಡಿದ ಭೋಜನ ಹೇಗೆ ರುಚಿಯನ್ನು ಹೆಚ್ಚಿಸುವುದೋ ಹಾಗೆ ಭಾವಾಭಿನಯಗಳಿಂದ ಕೂಡಿದ ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸಾ, ವಿಸ್ಮಯಾದಿ ಸ್ಥಾಯೀಭಾವಗಳಿಂದ ಕೂಡಿದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮುಂತಾದ ರಸಗಳನ್ನು ಸಹೃದಯರು ತಮ್ಮ ಮನೋವ್ಯಾಪಾರದ ಮೂಲಕ ಆಸ್ವಾದಿಸುತ್ತಾರೆ. ಹಾಗೆಯೇ ಭಾವಕ್ಕೂ ರಸಕ್ಕೂ ಇರುª ಸಂಬಂಧನಿಕಟವಾದುದು. ನಾಟ್ಯದಲ್ಲಿ ಭಾವದ ಮೂಲಕವಾಗಿಯೇ ರಸ ಉದ್ಭವಿಸುವುದು. ಭಾವವಿಲ್ಲದ ರಸವಿಲ್ಲ. ರಸ ವಿರಹಿತವಾದ ಭಾವವಿಲ್ಲ. ಭರತನು ಈ ರೀತಿ ಹೇಳಿದ್ದಾನೆ.
			ನ ಭಾವ ಹೀನೋಸ್ತಿ ರಸೋ ನಭಾವೋ ರಸವರ್ಜಿತಃ |
			ಪರಸ್ಪರಕೃತಾ ಸಿದ್ಧಿಃ ತಯೋರಭಿನಯೋ ಭವೇತ್ ||

ವಸ್ತುವಿಗೆ ತಕ್ಕ ಅಭಿನಯ, ಅಭಿನಯಕ್ಕೆ ತಕ್ಕ ಭಾವ, ಭಾವಕ್ಕೆ ಉಚಿತವಾದ ರಸ, ಹೀಗೆ ಒಂದಕ್ಕೊಂದು ಪೋಷಕವಾದುದರಿಂದ ಅಭಿನಯ ನಾಟ್ಯರಸಾನುಭವದ ಏಕೈಕ ಅಂಗವಲ್ಲದಿದ್ದರೂ ಪ್ರಮುಖ ಅಂಗವಾಗುತ್ತದೆ.				
 (ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ